ಚಾರಿತ್ರಿಕ ಭಾಷಾವಿಜ್ಞಾನ 

ಭಾಷಾವಿಜ್ಞಾನದ ಎರಡು ಪ್ರಮುಖ ಭಾಗಗಳಲ್ಲೊಂದು (ಹಿಸ್ಟಾರಿಕಲ್ ಲಿಂಗ್ವಿಸ್ಟಿಕ್ಸ್); ಇನ್ನೊಂದು ವರ್ಣನಾತ್ಮಕ ಭಾಷಾವಿಜ್ಞಾನ(ಡಿಸ್ಕ್ರಿಪ್ಟಿವ್ ಲಿಂಗ್ವಿಸ್ಟಿಕ್ಸ್). ಒಂದು ಭಾಷೆಯ ಸಮಗ್ರ ಚರಿತ್ರೆಯನ್ನು ಅದರ ಪರಿವಾರದ ಸ್ವರೂಪವನ್ನು ಕಾಲಕ್ರಮದಂತೆ ವಿವರಿಸುವುದು ಚಾರಿತ್ರಿಕ ಭಾಷಾವಿಜ್ಞಾನದ ಉದ್ದೇಶ. ಇದನ್ನು ಐತಿಹಾಸಿಕ ಭಾಷಾವಿಜ್ಞಾನವೆಂದೂ ಕರೆಯುವುದಿದೆ. ಈ ಕಾರ್ಯವನ್ನು ತೌಲನಿಕ ಪದ್ಧತಿಯ ಮುಖಾಂತರ ಸಾಧಿಸಲಾಗುವುದು. ನಿರಂತರ ಬದಲಾವಣೆ ಯಾವುದೇ ಜೀವಂತ ಭಾಷೆಯ ವಿಶಿಷ್ಟ ಲಕ್ಷಣಗಳಲ್ಲಿ ಒಂದು. ಈ ಬದಲಾವಣೆಗೆ ಕಾರಣ ಎನಿಸುವ ಅಂಶ ಹಾಗೂ ಕಾರಣಗಳನ್ನೂ ವಿವೇಚಿಸುವುದು ಮೊದಲ ಕೆಲಸ. ಒಮ್ಮೆ ಒಂದಾಗಿದ್ದ ಭಾಷೆ ಕಾರಣಾಂತರಗಳಿಂದ ಒಡೆದು ಅನೇಕ ಭಾಷೆಗಳಾಗುವುದುಂಟು. ಈ ಭಾಷೆಗಳ ಪರಸ್ಪರ ತೌಲನಿಕ ಅಧ್ಯಯನದ ಮೂಲಕ ಮೂಲಭಾಷೆಯನ್ನು ಗುರುತಿಸುವುದು, ಕೆಲವೇಳೆ ರಚಿಸುವುದು ಇನ್ನೊಂದು ಕೆಲಸ. ಇಂಥ ಸಾಧನೆಗೆ ಅವಶ್ಯಕವಾದ ಎಲ್ಲ ಪ್ರಕ್ರಿಯೆ ಮತ್ತು ಸಿದ್ಧಾಂತಗಳನ್ನೂ ಚಾರಿತ್ರಿಕ ಭಾಷಾವಿಜ್ಞಾನ ಒಳಗೊಂಡಿದೆ.

ಮೊದಮೊದಲು ಚಾರಿತ್ರಿಕ ಭಾಷಾವಿಜ್ಞಾನ ಭಾಷಾಭ್ಯಾಸದ ತಳಹದಿಯಾಗಿತ್ತು. ಕಾಲಾಂತರದಿಂದ ಅದರ ಸ್ಥಾನವನ್ನು ವರ್ಣನಾತ್ಮಕ ಭಾಷಾವಿಜ್ಞಾನ ಸೈದ್ಧಾಂತಿಕವಾಗಿ ಆವರಿಸಿತು. ಇತ್ತೀಚೆಗೆ ಅದೇ ಭಾಷಾವಿಜ್ಞಾನದ ಸಾಮ್ರಾಜ್ಞೆ ಎನಿಸಿದೆ.

ಒಂದು ಪ್ರದೇಶದ ಒಂದು ಕಾಲದ ಒಂದು ಭಾಷೆಯ ಅಭ್ಯಾಸವನ್ನು ಮಾಡುವುದು ವರ್ಣನಾತ್ಮಕ ಭಾಷಾವಿಜ್ಞಾನದ ಉದ್ದೇಶ. ಭಾಷಾಭ್ಯಾಸದ ಕಾಲ ಮತ್ತು ಪ್ರದೇಶಗಳ ಮಿತಿ ಹೆಚ್ಚಾದರೆ, ತುಲನೆ ತಲೆದೋರುತ್ತದೆ. ತುಲನೆ ಬಂದೊಡನೆ ಚಾರಿತ್ರಿಕ ರೀತಿ ಕಾಣಿಸಿಕೊಳ್ಳುತ್ತದೆ. ಹೀಗೆ ಒಂದು ಭಾಷೆಯ ಕೇವಲ ಭಿನ್ನ ಕಾಲ ಅಥವಾ ಪ್ರದೇಶಗಳ ಅನೇಕ ಹಂತಗಳ ತುಲನಾತ್ಮಕ ಅಧ್ಯಯನವೇ ಚಾರಿತ್ರಿಕ ಭಾಷಾವಿಜ್ಞಾನದ ಒಂದು ಭಾU. ಒಂದೇ ಭಾಷೆಯ ತೌಲನಿಕ ಅಧ್ಯಯನಕ್ಕೆ ಐತಿಹಾಸಿಕಭಾಷಾವಿಜ್ಞಾನವೆಂದೂ ಅನೇಕ ಭಾಷೆಗಳ ತೌಲನಿಕ ಅಧ್ಯಯನಕ್ಕೆ ತೌಲನಿಕ ಭಾಷಾವಿಜ್ಞಾನವೆಂದೂ ಕರೆಯುವರು.

ಚಾರಿತ್ರಿಕ ಭಾಷಾವಿಜ್ಞಾನ ವಿಚಾರ ಮಾಡುವ ಕೆಲವು ಮುಖ್ಯ ಸಂಗತಿಗಳು. ಭಾಷೆಯ ಬದಲಾವಣೆ, ಬದಲಾವಣೆಯ ವೈವಿಧ್ಯ, ತಂತ್ರಗಳು, ಸ್ವೀಕರಣ, ಅದರ ಆವಶ್ಯಕತೆ, ಸಾದೃಶ್ಯ ಸೃಷ್ಟಿ, ಧ್ವನಿ ಬದಲಾವಣೆ ಮತ್ತು ಅದರ ಪರಿಣಾಮ, ಭಾಷಿಕ ಭೂಗೋಳ, ಭಾಷಾ ಭಿನ್ನತೆ, ಕೃತಕ ಭಾಷೆ, ಭೌಗೋಳಿಕ ಪ್ರಸಾರ, ತೌಲನಿಕ ಪದ್ಧತಿ, ಭಾಷೆಗಳ ವರ್ಗೀಕರಣ, ಅವುಗಳ ಅನುವಂಶಿಕ ಸಂಬಂಧ, ಹಾಗೂ ಆಂತರಿಕ ಪುನಾರಚನೆ, ಭಾಷಾ ಕಾಲಕ್ರಮವಿಜ್ಞಾನ, ಜಗತ್ತಿನ ಭಾಷೆ ಮತ್ತು ಪ್ರಮಾಣಭಾಷೆ ಮೊದಲಾದವು. ಈ ಎಲ್ಲ ವಿಷಯಗಳ ಸಮಗ್ರ ನಿರೂಪಣೆಯಿಂದ ಈ ವಿಜ್ಞಾನದ ಮಹತ್ತ್ವ ಮತ್ತು ವ್ಯಾಪ್ತಿ ಎಷ್ಟಿದೆಯೆಂಬುದನ್ನು ಊಹಿಸಬಹುದು.

ಭಾಷೆ ಬದಲಾಗುತ್ತದೆ ಎಂಬ ಮಾತಿಗೆ ಆಧಾರ ಇಲ್ಲವೆ ಕಾರಣಗಳ ಆವಶ್ಯಕತೆಯಿಲ್ಲ. ಬದಲಾವಣೆ ಭಾಷೆಯ ಜೀವಾಳ. ಜಗತ್ತಿನ ಇಂದಿನ ಸಾಹಿತ್ಯ ಭಾಷೆಗಳನ್ನು ನೋಡಿದರೆ ಅವು ಹಂತಹಂತವಾಗಿ ಬೆಳೆದು ಬಂದದ್ದು ಕಂಡು ಬರುತ್ತದೆ. ಹೀಗೆ ಬೆಳೆದು ಬರುವಾಗ ಬದಲಾವಣೆಗಳಾಗುವುದು ಸ್ವಾಭಾವಿಕ ಹಾಗೂ ಅನಿವಾರ್ಯ. ಭಾಷೆಯ ಬದಲಾವಣೆ ಹರಿಯುವ ನೀರಿನಂತೆ ನಿರಂತರ. ಭಾಷೆಯ ಆರಂಭದ ಸ್ಥಿತಿಗೂ ಬದಲಾವಣೆಯಾದ ಸ್ಥಿತಿಗೂ ಸಹಜವಾಗಿ ವ್ಯತ್ಯಾಸ ಕಂಡುಬರುತ್ತದೆ. ಈ ಮೂಲಕ ಪ್ರತಿಯೊಂದು ಭಾಷೆಯ ವಿವಿಧ ಘಟ್ಟಗಳನ್ನು ಕಲ್ಪಿಸಲು ಸಾಧ್ಯ. ಉದಾಹರಣೆ: ಕನ್ನಡವನ್ನು ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡವೆಂದು ಮೂರು ಘಟ್ಟಗಳಲ್ಲಿ ವಿಭಾಗಿಸಬಹುದು. ಇದಕ್ಕೆ ಶಾಸನಗಳು, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಗ್ರಂಥಗಳು ನಿದರ್ಶನ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಅವಲೋಕಿಸಿದರೆ ಈ ಕೆಲವು ಅಂಶಗಳು ಸ್ಟಷ್ಟವಾಗುತ್ತವೆ.
ಹಿಂದಿದ್ದ ಅನೇಕ ರೂಪಗಳು ಬದಲಾಗಿವೆ. ಕನ್ನಡದ ವಿಭಕ್ತಿ ಪ್ರತ್ಯಯಗಳಲ್ಲಿ ಬದಲಾವಣೆಗಳು ಆಗಿವೆ. ಸ್ವರ ವ್ಯತ್ಯಾಸವೂ ಕಂಡುಬರುತ್ತದೆ. ಅಲ್ಲದೆ ಪ ಕಾರ ಹ ಕಾರವಾಗಿಯೂ ವ ಕಾರ ಬ ಕಾರವಾಗಿಯೂ ಬದಲಾವಣೆಯಾದದ್ದು ಕಂಡುಬರುತ್ತದೆ. ವಡ್ಡಾರಾಧನೆಯಲ್ಲಿ ಬರುವ ಕೆಲವು ರೂಪಗಳು ಇಂದು ಬಳಕೆಯಲ್ಲಿಲ್ಲ. ಅವುಗಳ ಬದಲಾಗಿ ಹೊಸ ರೂಪಗಳು ಬಳಕೆಗೊಂಡಿದೆ. ಅಂದು ಬಳಕೆಯಲ್ಲಿದ್ದ ¾  ಮತ್ತು ¿ ವರ್ಣಗಳು ಇಂದು ಬಳಕೆಯಲ್ಲಿಲ್ಲ. ಸ್ವೀಕರಣದ ಪರಿಣಾಮ ಅನೇಕ ಹೊಸ ಹೊಸ ಪದಗಳು ಸ್ವೀಕರಣಗೊಂಡಿದೆ. ಉದಾಹರಣೆ-ಜವಾಜು, ಲಡಾಯಿ, ಪಿಂಚಣಿ, ಲಡ್ಡು ಇತ್ಯಾದಿ. ಕಾಲದ ಅಂತರ ಹೆಚ್ಚಿದರೆ ಹಿಂದಿನ ಭಾಷೆಯನ್ನು ತಿಳಿಯುವುದು ಕಷ್ಟ. ಅಂತರ ಕಡಿಮೆಯಿದ್ದಷ್ಟೂ ಅರಿವಿನ ಮಟ್ಟ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ, ನಿತ್ಯ ಬದಲಾಗುತ್ತಿರುವ ಭಾಷೆ ಕಡಿಮೆ ಕಾಲಾವಧಿಯಲ್ಲಿ ಕಡಿಮೆ ಬದಲಾವಣೆಯಾಗುತ್ತದೆ. ಕಾಲದ ಅಂತರ ಹೆಚ್ಚಿದಂತೆ ಈ ಭಿನ್ನಾಂಶಗಳು ಹೆಚ್ಚಾಗುತ್ತಾ ಹೋಗುತ್ತವೆ. ಇಂಥ ಬದಲಾವಣೆ ಎಲ್ಲ ಭಾಷೆಗಳಿಗೂ ಅನ್ವಯಿಸುತ್ತದೆಯಾದರೂ ಅವುಗಳಲ್ಲೆಲ್ಲ ಇದು ಒಂದೇ ತೆರನಾಗಿ ಕಂಡುಬರುವುದಿಲ್ಲ. ಭಾಷೆ ಭಾಷೆಗಳ ನಡುವೆ ಬದಲಾವಣೆಗಳ ಭಿನ್ನತೆ ಕಂಡುಬರಲು ಆಯಾ ಭಾಷೆಗಳ ಲಿಪಿ ಕಾರಣವಾಗುತ್ತದೆ. ಇಂಗ್ಲಿಷ್ ಭಾಷೆಯ ಹಂತಹಂತಗಳಲ್ಲಿನ ಕಾಗುಣಿತದ (ಸ್ಪೆಲಿಂಗ್) ವ್ಯತ್ಯಾಸಗಳು ಕನ್ನಡದಲ್ಲಿ ಕಂಡುಬರುವುದಿಲ್ಲ. ಒಮ್ಮೊಮ್ಮೆ ಬರೆವಣಿಗೆಯ ಹಾಗೂ ಉಚ್ಚಾರಣೆಯ ವ್ಯತ್ಯಾಸವನ್ನು ಸೂಚಿಸುತ್ತದೆಯೇ ಇಲ್ಲವೇ ಎಂಬುದನ್ನು ಹೇಳುವುದೂ ಅಸಾಧ್ಯವಾಗುತ್ತದೆ. ಆದರೆ ಕನ್ನಡದಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ತೋರುತ್ತದೆ. ಬರೆದಂತೆ ಉಚ್ಚಾರ ಮಾಡುವುದು ಕನ್ನಡದ ವೈಶಿಷ್ಟ್ಯ.

ಯಾವುದೇ ಒಂದು ಭಾಷೆಯಲ್ಲಿ ನಡೆಯುವ ಬದಲಾವಣೆಗಳನ್ನು ತಡೆಯುವುದು ಯಾರಿಗೂ ಸಾಧ್ಯವಿಲ್ಲ. ಅದು ಒಂದು ನಿರಂತರ ನಿಶ್ಚಿತ ಲಕ್ಷಣ. ವೈಯಾಕರಣರು ಇಂಥ ಬದಲಾವಣೆಗಳನ್ನು ತಡೆಯಲು ವ್ಯರ್ಥ ಪ್ರಯತ್ನ ಮಾಡಿದ್ದುಂಟು. ಸಂಸ್ಕøತದ ವ್ಯಂಜನಾಂತ ಶಬ್ಧಗಳು ಪ್ರಾಕೃತಕ್ಕೆ ಬರುವಾಗ ಸ್ವರಾಂತಗಳಾದುವು. ಒಮ್ಮೊಮ್ಮೆ ಅಂತ್ಯ ವ್ಯಂಜನಗಳು ಬಿದ್ದುಹೋದವು. ಕನ್ನಡದಲ್ಲಿಯೂ ಇಂಥದೇ ಪ್ರಕ್ರಿಯಾ ಲಕ್ಷಣ ಕಂಡುಬರುತ್ತದೆ. ಹಳೆಗನ್ನಡದ ವ್ಯಂಜನಾಂತ ಪದಗಳು ಸ್ವರಾಂತಗಳಾದುವು. ಉದಾ : ಒರಲ್>ಒರಳು, ಕೊರಲ್>ಕೊರಳು, ಬೆರಲ್>ಬೆರಳು ಇತ್ಯಾದಿ. ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿಯೂ ಇಂಥ ಬದಲಾವಣೆಗಳನ್ನು ತಡೆಯುವ ವಿಫಲ ಪ್ರಯತ್ನ ನಡೆದಿದೆ. ಕೆಲವೇ ಸಂದರ್ಭಗಳಲ್ಲಿ ಇಂಥ ಪ್ರಯತ್ನ ಸಫಲವಾಗುವುದು. ಧಾರ್ಮಿಕ ಕಾರಣದಿಂದ ಪೂರ್ವಕಾಲದಲ್ಲಿ ಬಳಕೆಯಲ್ಲಿದ್ದ ಪದಗಳು ಮುಂದುವರಿಯಬಹುದು. ಸಂಸ್ಕøತ, ಲ್ಯಾಟಿನ್, ಹಿಬ್ರು ಭಾಷೆಗಳು ಈ ಸಂಗತಿಗೆ ತಕ್ಕ ಉದಾಹರಣೆಗಳು.

ಒಟ್ಟಿನಲ್ಲಿ ಹೇಳುವುದಾದರೆ, ಭಾಷೆ ಬದಲಾಗುವುದು ಒಂದು ಸ್ವಾಭಾವಿಕ ಘಟನೆ, ಭಾಷೆಯಲ್ಲಿ ತೋರುವ ಭಿನ್ನತೆಯೂ ಅಷ್ಟೇ ಸ್ವಾಭಾವಿಕ. ಭಿನ್ನತೆಗಳು ಎಷ್ಟೇ ಹೆಚ್ಚಾಗಿದ್ದರೂ ಒಂದೇ ಮೂಲದಿಂದ ಹೊರಟ ಭಾಷೆಗಳಲ್ಲಿ ಪರಸ್ಪರ ಸಂಬಂಧ ಕಂಡುಬರುತ್ತದೆ. ಈ ಮೂಲವನ್ನು ತಾಯಿಭಾಷೆ ಎಂದು ಕರೆಯುವುದುಂಟು.

ಒಂದು ವಿಶಿಷ್ಟ ಕಾಲದ ಹಿಂದೆ ಇದ್ದ ಉಪಭಾಷೆಗಳು ಸಂಬಂಧಿತ ಭಾಷೆಗಳೆನಿಸಿಕೊಳ್ಳುವುವು. ಅವು ಬಳಕೆಯಲ್ಲಿರುವವರೆಗೆ ಈ ಸಂಬಂಧ ಮುಂದುವರಿಯುತ್ತದೆ. ಕಾಲ ಉರುಳಿದಂತೆ ಸಾಮ್ಯಾಂಶ ಕಡಿಮೆಯಾಗುತ್ತಾ ಹೋಗಬಹುದು. ಹೊಸ ಅಂಶಗಳು ಸೇರಿಕೊಳ್ಳುವುದರಿಂದಲಂತೂ ಎರಡೂ ಭಾಷೆಗಳಲ್ಲಿ ಪರಸ್ಪರ ಸಂಬಂಧವಿದೆಯೇ ಎಂಬ ಸಂಶಯ ತಲೆದೋರುವುದುಂಟು. ಆದರೆ ಅವುಗಳ ಸಂಬಂಧವನ್ನು ಗುರುತಿಸುವ ಅಂಶಗಳು ಇದ್ದೇ ಇರುತ್ತವೆ. ಆದ್ದರಿಂದ ಈ ಸಂಬಂಧ ಮುಂದುವರಿಯುತ್ತದೆ. ದೂರದಲ್ಲಿರುವ ಬ್ರಾಹೂ ಈ ಭಾಷೆಯಲ್ಲಿ ದ್ರಾವಿಡ ಭಾಷೆಯ ಅಂಶಗಳು ಕಂಡುಬರುವುದರಿಂದ ಅದು ದ್ರಾವಿಡ ಭಾಷೆಯೆಂದು ಹೇಳಿದರೂ ಅದಕ್ಕೆ ವಿಶಿಷ್ಟವಾದ ಕೆಲವು ಅಂಶಗಳು ಅದರಲ್ಲಿ ಬೆಳದು  ಬಂದಿರುವುದು ಕಂಡುಬರುತ್ತದೆ.

ಭಾಷೆಯಲ್ಲಿಯ ಬದಲಾವಣೆಯೆಂದರೆ ಭಾಷಾರಚನೆಯ ಒಂದೊಂದು ಉಪವಿಭಾಗದ ಮೇಲೆ ಆಗುವ ಪರಿಣಾಮ. ಒಂದೊಂದು ವಿಭಾಗದ ಮೇಲೆ ಆಗುವ ಪರಿಣಾಮಕ್ಕೆ ಆ ವಿಭಾಗದ ಹೆಸರನ್ನೇ ಕೊಡುವ ರೂಢಿಯುಂಟು. ಹೀಗೆ ಭಾಷಾರಚನೆಯ ವಿಭಾಗಗಳು ತಮ್ಮ ಬದಲಾವಣೆಯ ಮುಖಾಂತರ ಬದಲಾವಣೆಯ ವೈವಿಧ್ಯಗಳನ್ನು ತೋರಿಸುತ್ತವೆ. ಭಾಷಿಕ ಬದಲಾವಣೆಯ ವೈವಿಧ್ಯವನ್ನು ತಿಳಿದುಕೊಳ್ಳುವ ಮೊದಲು ಭಾಷಾರಚನೆಯ ಉಪವಿಭಾಗಗಳು ಯಾವುವು ಎಂಬುದನ್ನು ಅವಶ್ಯ ತಿಳಿದುಕೊಳ್ಳಬೇಕು.
ಧ್ವನಿ, ಧ್ವನಿಮಾ, ಆಕೃತಿಮಾ, ವಾಕ್ಯರಚನೆ ಮತ್ತು ಅರ್ಥ-ಇವು ಭಾಷಾ ರಚನೆಯ ಪ್ರಮುಖ ಉಪವಿಭಾಗಗಳು. ಈ ವಿಭಾಗಗಳನ್ನು ಎರಡು ಬಗೆಯಾಗಿ ವಿಂಗಡಿಸಬಹುದು. ಅವೇ ಕೇಂದ್ರ ವಿಭಾಗ ಮತ್ತು ಬಾಹ್ಯ ವಿಭಾಗ. ಕೇಂದ್ರ ವಿಭಾಗದಲ್ಲಿ, ಧ್ವನಿಮಾ, ಆಕೃತಿಮಾ ಮತ್ತು ವಾಕ್ಯರಚನಾ ವಿಭಾಗಗಳನ್ನೂ ಬಾಹ್ಯ ವಿಭಾಗದಲ್ಲಿ ಉಳಿದ ಧ್ವನಿ ಹಾಗೂ ಅರ್ಥ ವಿಭಾಗಗಳನ್ನೂ ಸೇರಿಸುವುದುಂಟು. ಕೇಂದ್ರ ವಿಭಾಗಕ್ಕೆ ಒಳಪಟ್ಟವು ನೇರವಾಗಿ ಭಾಷಾರಚನೆಗೆ ಸಂಬಂಧಪಟ್ಟಿವೆ. ಆದರೆ ಧ್ವನಿ ಮತ್ತು ಅರ್ಥ ವಿಭಾಗಗಳು ಬೇರೆ ವಿಜ್ಞಾನಗಳಿಗೂ ಸಂಬಂಧಪಟ್ಟಿವೆ. ಈ ವರ್ಗೀಕರಣವನ್ನು ತಳಹದಿಯಾಗಿಟ್ಟುಕೊಂಡು ಭಾಷಿಕ ಬದಲಾವಣೆಯ ವೈವಿಧ್ಯಗಳ ಸಾಮಾನ್ಯ ಲಕ್ಷಣಗಳನ್ನು ಹೀಗೆ ನಿರೂಪಿಸಿ ವಿವರಿಸಬಹುದು.

ಧ್ವನಿಮಾ ಬದಲಾವಣೆ: ಒಂದು ಭಾಷೆಯ ಒಟ್ಟು ಧ್ವನಿಮಾ ವ್ಯವಸ್ಥೆಯ ಸಂಖ್ಯೆಯಲ್ಲಿ ಹೆಚ್ಚು ಅಥವಾ ಕಡಿಮೆಯಾದರೆ ಇಲ್ಲವೆ ಧ್ವನಿಮಾ ಸಂಯೋಜನೆಯಲ್ಲಿ ವ್ಯತ್ಯಾಸವುಂಟಾದರೆ, ಅದಕ್ಕೆ ಧ್ವನಿಮಾ ಬದಲಾವಣೆ ಎನ್ನುವರು. ಹಳಗನ್ನಡದಲ್ಲಿದ್ದ ಳ್ ಮತ್ತು ¿õï ಧ್ವನಿಮಾಗಳು ಕೂಡಿಕೊಂಡು ಹೊಸಗನ್ನಡದಲ್ಲಿ ಒಂದೇ (ಳ್) ಧ್ವನಿಮಾ ಆಗಿದೆ. ಅದೇ ರೀತಿ ರ್ ಮತ್ತು ¾õï ಕೂಡಿ ರ್ ಆಗಿದೆ. ಹಳಗನ್ನಡದಲ್ಲಿದ್ದ ಪ್ ಉಳಿದುಕೊಂಡು ಅದರೊಡನೆ ಹ್ ಬೆಳೆದುಕೊಂಡು ಬಂದಿದೆ. ಪಲ್ಲಿ>ಹಲ್ಲಿ, ಪಗ್ಗ>ಹಗ್ಗ-ಹೀಗೆ ಧ್ವನಿಮಾ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾದದ್ದು ತೋರಿಬರುತ್ತದೆ.

ವ್ಯಾಕರಣ ವ್ಯವಸ್ಥೆಯ ಬದಲಾವಣೆ: ಇದರಲ್ಲಿ ವ್ಯಾಕರಣ ಮತ್ತು ಪದಕೋಶಗಳ ಬದಲಾವಣೆಗಳು ಸೇರುತ್ತವೆ. ವ್ಯಾಕರಣದ ತಿರುಳಿನಲ್ಲಿ ಆಗುವ ಬದಲಾವಣೆ ಇಲ್ಲಿ ಮುಖ್ಯ. ಈ ತಿರುಳಿನಲ್ಲಿ ವ್ಯಾಕರಣ ವರ್ಗ, ವಾಕ್ಯ ಖಂಡ ಮತ್ತು ರಚನೆಗಳು ಅಡಕವಾಗಿವೆ. ಹಳಗನ್ನಡದಲ್ಲಿ -ಇಸು ಪ್ರತ್ಯಯ ಸಾಮಾನ್ಯವಾಗಿ ಧಾತುರೂಪಗಳಿಗೆ ಹಚ್ಚುತ್ತಿದ್ದು. ಹೊಸಗನ್ನಡದಲ್ಲಿ ಅದನ್ನು ನಾಮರೂಪಗಳಿಗೂ ಹಚ್ಚುವ ರೂಢಿ ಬಂದಿದೆ. ಉದಾ: ರಚಿಸು, ರಮಿಸು, ವಚನಿಸು, ಸಮರ್ಪಿಸು, ಕವನಿಸು-ಹೀಗೆ ವ್ಯಾಕರಣ ಬದಲಾವಣೆಯಾದದ್ದು ಕಂಡುಬರುತ್ತದೆ. ಅಲ್ಲದೆ ಕನ್ನಡದಲ್ಲಿ ಕರ್ಮಣಿ ಪ್ರಯೋಗವನ್ನು ಬಳಕೆ ಮಾಡುವುದುಂಟು. ಇದು ಸಂಸ್ಕøತದ ಪ್ರಭಾವದಿಂದ ಬಂದದ್ದು. ಇದೂ ವ್ಯಾಕರಣದ ಬದಲಾವಣೆಯೇ.

ಪದಕೋಶ ಬದಲಾವಣೆ: ಭಾಷೆಯಲ್ಲಿನ ಪದಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆಗೆ ಪದಕೋಶ ಬದಲಾವಣೆ ಎನ್ನುವರು. ಪದಕೋಶಗಳ ಮೂಲಕ ಇದನ್ನು ತಿಳಿದುಕೊಳ್ಳಬಹುದು. ಸ್ವೀಕರಣದ ಪರಿಣಾಮದಿಂದ ಬೇರೊಂದು ಭಾಷೆಯಿಂದ ಅನೇಕ ಪದಗಳು ಒಂದು ಭಾಷೆಗೆ ಸೇರಿಕೊಳ್ಳುತ್ತವೆ. ಕನ್ನಡದ ಪದ ಸಂಗ್ರಹದಲ್ಲಿ ಸಂಸ್ಕøತ, ಪ್ರಾಕೃತ, ತಮಿಳು, ಪೋರ್ಚುಗೀಸ್, ಪಾರಸಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಅನೇಕ ಪದಗಳು ಸೇರ್ಪಡೆಯಾಗಿವೆ. ನಮ್ಮಲ್ಲಿಲ್ಲದ ವಸ್ತುವನ್ನು ನಿರ್ದೇಶಿಸುವಾಗ ಹಳೆಯ ಎರಡು ಪದಗಳನ್ನು ಸೇರಿಸಿ ಹೊಸ ಸಮಾಸ ಪದವನ್ನು ಸೃಷ್ಟಿ ಮಾಡಿರುವುದುಂಟು. ಉದಾ : ಸೀಮೆಯೆಣ್ಣೆ. ಕೆಲವೇಳೆ ಅನ್ಯಭಾಷಾ ಪದದ ಅನುವಾದ ಮಾಡಿರುವುದೂ ಉಂಟು. ಉದಾ : ಹ್ಯಾಂಡ್‍ಬ್ಯಾಗ್=ಕೈಚೀಲ.

ಒಮ್ಮೊಮ್ಮೆ ಭಾಷೆಯಲ್ಲಿಯೇ ನಡೆಯುವ ಸಾದೃಶ್ಯ ಸೃಷ್ಟಿಯ ಮೂಲಕ ಹೊಸ ಹೊಸ ಪದಗಳು ರಚನೆಗೊಂಡವು. ಆ ಭಾಷೆಯ ಪದಸಂಪತ್ತನ್ನು ಹೆಚ್ಚಿಸುವುದುಂಟು. ಉದಾ : ಕೆಲವು ನಾಮಪದಗಳಿಗೆ -ಇಸು ಪ್ರತ್ಯಯವನ್ನು ಹಚ್ಚುತ್ತಿರಲಿಲ್ಲ. ಆದರೆ ಈಗ ಅಂಥ ಪದಗಳು ಬಳಕೆಯಲ್ಲಿವೆ. ಉದಾ: ಕತ್ತಲು-ಕತ್ತಲಿಸು, ಗಾಳಿ-ಗಾಳಿಸು. ಇತ್ಯಾದಿ.

ಆಕೃತಿ ಧ್ವನಿಮಾ ವ್ಯವಸ್ಥೆಯಲ್ಲಿಯ ಬದಲಾವಣೆಯಲ್ಲಿ ರೂಪಬದಲಾವಣೆ ಮತ್ತು ವಿಕಲ್ಪ ಬದಲಾವಣೆ ಎಂಬ ಎರಡು ವಿಧಗಳುಂಟು. ಮೊದಲಿದ್ದ ಆಕೃತಿಮಾ ರೂಪಗಳು ಬದಲಾದರೆ ಅದು ರೂಪ ಬದಲಾವಣೆಯಾಗುತ್ತದೆ. ಹಳಗನ್ನಡದ ವ್ಯಂಜನಾಂತ ಪದಗಳು ಹೊಸಗನ್ನಡದಲ್ಲಿ ಸ್ವರಾಂತಗಳಾದುವು. ಉದಾ : ನಾನ್>ನಾನು, ಅವನ್>ಅವನು, ಅವಳ್>ಅವಳು. ವಿಕಲ್ಪ ಬದಲಾವಣೆಯಲ್ಲಿ ಬದಲಾದ ರೂಢಿ ಮೂಲಕ ಭಾಷೆಯಲ್ಲಿ ಮೊದಲು ಬಳಕೆಯಲ್ಲಿದ್ದ ರೂಪದ ಜೊತೆಗೆ ಇನ್ನೊಂದು ಹೊಸ ರೂಪ ಸೇರಿಕೊಂಡು ಎರಡೂ ರೂಪಗಳು ಉಪಯೋಗಿಸಲ್ಪಡುತ್ತವೆ. ಉದಾ : ಸಿಗು, ಸಿಕ್ಕನು, ಸಿಕ್ಕಿದನು.
ಅರ್ಥ ಬದಲಾವಣೆ : ಭಾಷೆಯ ಒಂದು ಹಂತದಲ್ಲಿ ವಿಶಿಷ್ಟ ಅರ್ಥದಲ್ಲಿ ಬಳಕೆಯಲ್ಲಿದ್ದ ಕೆಲವು ಪದಗಳು ಮತ್ತೊಂದು ಹಂತಕ್ಕೆ ಬರುವಷ್ಟರಲ್ಲಿ ಅವು ತಮ್ಮ ಮೂಲ ಅರ್ಥವನ್ನು ಕಳೆದುಕೊಂಡು ಹೊಸ ಅರ್ಥವನ್ನು ಪಡೆಯುತ್ತವೆ. ಈ ಕ್ರಿಯೆಗೆ ಅರ್ಥ ಬದಲಾವಣೆ ಎನ್ನುವರು. ಕನ್ನಡದ ಪದಗಳಾದ ತಣಿ, ಗೆಳೆಯ, ಯಜಮಾನ ಮೊದಲಾದವು ತಮ್ಮ ಪೂರ್ವದ ಅರ್ಥದ ಜೊತೆಗೆ ಹೊಸ ಅರ್ಥವನ್ನು ಪಡೆದಿವೆ. ತಣಿ=ತೃಪ್ತಿಗೊಳ್ಳು; ದಣಿ, ಗೆಳೆಯ=ಸ್ನೇಹಿತ; ಗೆಳೆಯ; ವಿಟ. ಯಜಮಾನ=ಯಜ್ಞದೊಡೆಯ ; ಒಡೆಯ.

ಹೀಗೆ ಅರ್ಥ ವ್ಯತ್ಯಾಸದ ಮೂಲಕ ಪದಕೋಶದಲ್ಲಿ ವ್ಯತ್ಯಾಸಗಳುಂಟಾಗುವುದು. ಬಾಹ್ಯ ವಿಭಾಗಕ್ಕೆ ಸೇರುವ ಬದಲಾವಣೆಯಲ್ಲಿ ಧ್ವನಿಬದಲಾವಣೆಯೂ ಒಂದು. ಉಚ್ಚಾರ ಮತ್ತು ಶ್ರವಣ ರೂಢಿಗಳಲ್ಲಿಯ ವ್ಯತ್ಯಾಸಗಳ ಮೂಲಕ ಭಾಷೆಯಲ್ಲಿ ಈ ಬದಲಾವಣೆ ಜರುಗುತ್ತದೆ. ಪಾಡು>ಹಾಡು. ಅಲ್ಪಪ್ರಾಣ ಮಹಾಪ್ರಾಣವಾಗುವಿಕೆಯೂ ಧ್ವನಿ ಬದಲಾವಣೆಗೆ ಒಂದು ಉದಾಹರಣೆ. ಕೆಲವು ತಂತ್ರಗಳ ಮೂಲಕ ಭಾಷೆಯಲ್ಲಿ ಬದಲಾವಣೆಗಳಾಗುತ್ತವೆ. ಭಾಷೆಯಲ್ಲಿ ಸರ್ವವ್ಯಾಪಿ ಬದಲಾವಣೆಗೆ ಕಾರಣವಾಗುವ ತಂತ್ರಗಳಿಗೆ ಪ್ರಮುಖತಂತ್ರಗಳೆಂದೂ ಅಲ್ಲೊಂದು ಇಲ್ಲೊಂದು ಬದಲಾವಣೆಗೆ ಕಾರಣವಾಗುವ ತಂತ್ರಗಳಿಗೆ ಗೌಣತಂತ್ರಗಳೆಂದೂ ಕರೆಯುವುದುಂಟು. ಪ್ರಧಾನ ತಂತ್ರಗಳಲ್ಲಿ ಧ್ವನಿ ಬದಲಾವಣೆ. ಸ್ವೀಕರಣ ಮತ್ತು ಸಾದೃಶ್ಯಗಳು ಸೇರ್ಪಡೆಯಾದರೆ, ಗೌಣ ತಂತ್ರಗಳಲ್ಲಿ ಧ್ವನಿ ಬದಲಾವಣೆ. ಸ್ವೀಕರಣ ಮತ್ತು ಸಾದೃಶ್ಯಗಳು ಸೇರ್ಪಡೆಯಾದರೆ, ಗೌಣ ತಂತ್ರಗಳಲ್ಲಿ ದೋಷಣೆ. ಅಧಿವಿಶ್ಲೇಷಣೆ, ಸದೃಶಾಕ್ಷರಲೋಪ, ವರ್ಣಪಲ್ಲಟ, ಸಮರೂಪಧಾರಣೆ ಮೊದಲಾದುವು ಸೇರ್ಪಡೆಯಾಗುವುದು. ಧ್ವನಿ ಬದಲಾವಣೆ ತಂತ್ರ ಭಾಷೆಯಲ್ಲಿ ಮೂಲಭೂತ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಉದಾ : ಹಳಗನ್ನಡದ ಪ್, ವ್ ಗಳು ಅನುಕ್ರಮವಾಗಿ ಹ್ ಮತ್ತು ಖ್ ಗಳಾದುವು.

ಎರಡು ಭಾಷೆಗಳು ಒಂದಕ್ಕೊಂದು ಸಮೀಪಿಸಿದಾಗ ಅವುಗಳಲ್ಲಿ ಸಂಪರ್ಕ ಕಂಡುಬರುವುದು ಸ್ವಾಭಾವಿಕ. ಅವೆರಡರ ನಡುವೆ ಕೊಡಕೊಳ್ಳುವ ವ್ಯವಹಾರ ನಡೆಯುವುದು ಸಹಜ. ಹೀಗಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಧ್ವನಿ/ಪದಗಳ ಸ್ವೀಕರಣೆ ನಡೆಯುವುದು; ಸಂಸ್ಕøತ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳಿಂದ ಕನ್ನಡ ಅನೇಕ ಪದಗಳು ಸ್ವೀಕರಣಗೊಂಡಿದೆ. ಭಾಷೆಗೆ ಈ ಸ್ವೀಕರಣ ಉಪಭಾಷೆಗಳಿಂದಲೂ ನಡೆಯುತ್ತದೆ. ಬಳಕೆಯಲ್ಲಿದ್ದ ಆಧಾರದ ಮೇಲೆ ಅವಕ್ಕೆ ಸಾದೃಶ್ಯವಾದ ಹೊಸ ರೂಪಗಳನ್ನು ಸೃಷ್ಟಿಸುವ ವಿಧಾನಕ್ಕೆ ಸಾದೃಶ್ಯವೆನ್ನುತ್ತಾರೆ. ಸಿಗು-ಸಿಕ್ಕನು, ಹೋಗು-ಹೊಕ್ಕನು, ನಗು-ನಕ್ಕನು, ಒಂದು ಪದದ ಸತತ ಸಹಚರ್ಯದ ಮೂಲಕ ಮತ್ತೊಂದು ಪದದ ರೂಪ ಬದಲಾಗುವುದಕ್ಕೆ ದೂಷಣೆಯೆಂದೂ ಹಳೆಯ ರೂಪವನ್ನು ಬಿಟ್ಟು ಹೊಸ ರೂಪವನ್ನು ಬಳಸುವುದಕ್ಕೆ ಅಧಿವಿಶ್ಲೇಷಣೆಯೆಂದೂ ಕರೆಯುವುದುಂಟು. ಉದಾ: ನಾನ್‍ನಾನುಂ, ನೀನ್-ನೀನುಂ ಇತ್ಯಾದಿ. ಕನ್ನಡದಲ್ಲಿ ಪುರುಷ ಸರಸ್ವತಿ ಪದ ಬಳಕೆಯಾಗುತ್ತಿದೆ. ಸರಸ್ವತಿ ಸ್ತ್ರೀಲಿಂಗ ಪದವಾಗಿದ್ದರೂ ಒಬ್ಬನ ಅಗಾಧ ಪಾಂಡಿತ್ಯವನ್ನು ಬಿಂಬಿಸಲು ಈ ಪದವನ್ನು ಬಳಸುತ್ತಾರೆ. ಆದರೂ ಆ ವ್ಯಕ್ತಿಗೆ ಅದು ಸರಿಯೆನಿಸಿದ್ದರಿಂದ, ಅದು ಬಳಕೆಯಾಗುತ್ತದೆ. ಎರಡು ಸದೃಶ ವರ್ಣಗಳಲ್ಲಿ ಒಂದು ಬಿದ್ದು ಹೋಗುವುದಕ್ಕೆ ಸದೃಶಾಕ್ಷರಲೋಪವೆಂದೂ ಒಂದು ಆಕೃತಿಮಾದಲ್ಲಿಯ ಧ್ವನಿಮಾಗಳು ತಮ್ಮ ಸ್ಥಾನಗಳನ್ನು ಬದಲಿಸಿಕೊಳ್ಳುವುದಕ್ಕೆ ವರ್ಣಪಲ್ಲಟವೆಂದೂ ಹೇಳುವುದುಂಟು. ಉದಾ: ಪ್ರಾಕೃತದಲ್ಲಿ ಹೃದಯ>ಹಿಯಮ>ಹಿಯ ; ವಾರಾಣಶೀ>ವಾಣಾರಸೀ. ಉಚ್ಚಾರಣೆಯ ಒಂದು ಅಂಶದಂತೆ ಮತ್ತೊಂದು ಅಂಶವಾಗುವುದು ಸಮರೂಪ ಧಾರಣೆ. ಕನ್ನಡ ಗರ್ದೆ>ಗದ್ದೆ. ಕಳ್ದನು>ಕದ್ದನು, ಪಕ್ಷಿ>ಪಕ್ಕಿ>ಹಕ್ಕಿ.

ಭಾಷಾ ಬದಲಾವಣೆ ಸ್ವೀಕರಣದ ಮೂಲಕ ನಡೆಯುತ್ತದೆಂದು ಈ ಮೊದಲೇ ಹೇಳಿದೆ. ಎರಡು ಭಾಷೆಗಳು ಇಲ್ಲವೆ ಉಪಭಾಷೆಗಳು ಪರಸ್ಪರ ಸಂಪರ್ಕದಲ್ಲಿ ಬಂದಕೂಡಲೇ ಪರಸ್ಪರ ಕೊಡ-ಕೊಳ್ಳುವ ಕ್ರಿಯೆ ನಡೆಯುವುದು. ಹೀಗೆ ನಡೆಯುವ ಸ್ವೀಕರಣಕ್ಕೆ ಭಾಷಾಸ್ವೀಕರಣ ಅಥವಾ ಸಾಂಸ್ಕøತಿಕ ಸ್ವೀಕರಣವೆಂದು ಹೆಸರು. ನಮ್ಮ ಭಾಷೆಯಲ್ಲಿ ಇಲ್ಲದ ವಿಚಾರ ಮತ್ತು ವಸ್ತುಗಳನ್ನು ಅನ್ಯಭಾಷೆಯಿಂದ ಸ್ವೀಕರಿಸುತ್ತೇವೆ. ಅದರಂತೆ ಅನ್ಯಭಾಷಿಕರು ನಮ್ಮ ಭಾಷೆಯೊಳಗಿಂದ ತಮಗೆ ಹೊಸವೆನಿಸುವ ಅಂಶಗಳನ್ನು ಸ್ವೀಕರಿಸುತ್ತಾರೆ. ಈ ಬಗೆಯ ಕೊಡ-ಕೊಳ್ಳುವಿಕೆ ಸಾಮಾನ್ಯವಾಗಿ ಮೂರು ರೀತಿಯಲ್ಲಿ ನಡೆಯುತ್ತದೆ. 1 ಪದ ಸ್ವೀಕರಣ, 2 ಸ್ಥಾನಾಂತರ ಸ್ವೀಕರಣ, 3 ಮಿಶ್ರ ಸ್ವೀಕರಣ.

ಧ್ವನಿಸ್ವೀಕರಣೆ ಪದಕೋಶ, ರೂಪ, ವ್ಯಾಕರಣ, ವಿಕಲ್ಪ ಮತ್ತು ಧ್ವನಿಮಾಗಳ ಬದಲಾವಣೆಗೆ ಕಾರಣವಾದರೆ, ಸ್ಥಾನಾಂತರ ಸ್ವೀಕರಣೆ ಭಾಷಾಂತರ ಮತ್ತು ರೂಪಾಂತರ ಸ್ವೀಕರಣೆಗಳಿಗೆ ಕಾರಣವಾಗುತ್ತದೆ. ಸಂಸ್ಕøತದಿಂದ ಕನ್ನಡಕ್ಕೆ ಬಂದ ತದ್ಭವಗಳನ್ನು ರೂಪಾಂತರ ಸ್ವೀಕರಣವೆಂದು ಹೇಳಬಹುದು. ಸಾಮಾನ್ಯವಾಗಿ ಸಾಮಾಜಿಕ ಪದಗಳಲ್ಲಿ ಒಂದು ನಮ್ಮ ಪದವಾಗಿದ್ದರೆ ಮತ್ತೊಂದು ಪರಭಾಷೆಯದಿರುತ್ತದೆ. ಇಂಥ ಸ್ವೀಕರಣಕ್ಕೆ ಮಿಶ್ರವೆನ್ನುವರು. ಉದಾ: ಅಣುಬಾಂಬು ರೈಲುಗಾಡಿ ಇತ್ಯಾದಿ. ಸ್ವೀಕರಣದ ಪ್ರಮಾಣ ಅತಿಯಾದಲ್ಲಿ, ಕೃತಕ ಭಾಷೆಗಳು ನಿರ್ಮಾಣಗೊಳ್ಳುತ್ತವೆ. ಕೃತಕ ಭಾಷೆಗಳನ್ನು ವ್ಯವಹಾರದ ಉದ್ದೇಶಕ್ಕಾಗಿ ಅಥವಾ ಅಭ್ಯಾಸ ಪ್ರವೃತ್ತಿಯ ಸಮಾಧಾನಕ್ಕಾಗಿ ನಿರ್ಮಿಸಬಹುದು. ಹೀಗೆ ನಿರ್ಮಿತವಾಗುವ ಭಾಷೆಗಳು ಮೂರು ತೆರನಾಗಿವೆ: 1 ವ್ಯವಹಾರ ಭಾಷೆಗಳು, 2 ಕ್ರಿಯೋಲಗಳು, 3 ಕೃತಕ ಭಾಷೆಗಳು, ಸಂತೆಯಲ್ಲಿ ಆಡುವ ಭಾಷೆಗೆ ವ್ಯವಹಾರ ಭಾಷೆಯೆಂದೂ ಈ ವ್ಯವಹಾರ ಭಾಷೆಯೇ ಕಾಲಾಂತರದಿಂದ ಓದು-ಬರೆಹದ ಭಾಷೆಯಾದಾಗ ಕ್ರಿಯೋಶೀಲವೆಂದೂ ವಿದ್ವಾಂಸನಿಂದ ಸೃಷ್ಟಿಸಲಾದ ಭಾಷೆಗೆ ಕೃತಕ ಭಾಷೆಯೆಂದೂ ಹೇಳುವುದುಂಟು. 			(ನೋಡಿ- ಕೃತಕ-ಭಾಷೆಗಳು)

ಒಂದು ಭಾಷೆಯನ್ನಾಡುವ ಇಬ್ಬರು ವ್ಯಕ್ತಿಗಳು ಒಂದೇ ರೀತಿಯಲ್ಲಿ ಮಾತಾಡುವುದಿಲ್ಲ. ಭಾಷೆ ಒಬ್ಬನಿಂದ ಮತ್ತೊಬ್ಬನಿಗೆ ಭಿನ್ನವಾಗಿರುತ್ತದೆ. ಒಂದು ಭಾಷಾ ಗುಂಪಿನಿಂದ ಮತ್ತೊಂದು ಭಾಷಾ ಗುಂಪಿಗೆ ವ್ಯತ್ಯಾಸಗಳಿರುತ್ತವೆ. ಸಮಾಜ ಒಂದೇ ಆಗಿದ್ದರೂ ಸಾಮಾಜಿಕವಾಗಿ ಅದರ ವರ್ಗ, ವೃತ್ತಿ, ಸಾಂಸ್ಕøತಿಕ ರೀತಿನೀತಿಗಳು ಭಿನ್ನಭಿನ್ನವಾಗಿರುತ್ತವೆ. ಒಂದು ಭಾಷೆಯ ಪ್ರದೇಶ ವಿಸ್ತಾರವಾದಷ್ಟೂ ಭಿನ್ನಾಂಶಗಳು ಹೆಚ್ಚುತ್ತವೆ. ಇಂಥ ಭಿನ್ನಾಂಶಗಳನ್ನು ಭಾಷಾ ಭೂಗೋಳದಲ್ಲಿ ಚೆನ್ನಾಗಿ ತಿಳಿದುಕೊಳ್ಳಬಹುದು. ಭಾಷಾ ಭೂಗೋಳದಲ್ಲಿ ವ್ಯಕ್ತಿ ಭಾಷೆ, ಪ್ರಭೇದ ಸಮಾವೇಶಗೊಳ್ಳುತ್ತದೆ. ಇದಲ್ಲದೆ ಭಾಷಾಭಿನ್ನತೆ ಮತ್ತು ಭಾಷಾ ಬದಲಾವಣೆಗಳ ಭೌಗೋಳಿಕ ಪ್ರಸಾರ ಹೇಗೆ ನಡೆಯುವುದೆಂಬುದನ್ನು ಭಾಷಾ ಭೂಗೋಳದಿಂದ ತಿಳಿದುಕೊಳ್ಳಬಹುದು.
ವ್ಯಕ್ತಿ ಭಾಷೆ, ಪ್ರಭೇದ ಮತ್ತು ಉಪಭಾಷೆ-ಇವು ಭಾಷೆಯಲ್ಲಿನ ವೈವಿಧ್ಯವನ್ನು ತೋರಿಸುತ್ತವೆ. ಈ ವೈವಿಧ್ಯ ಭಾಷಾ ಭಿನ್ನತೆಯನ್ನು ಸೂಚಿಸುತ್ತದೆ. ಭಾಷಾ ಭಿನ್ನತೆಗೆ ಪ್ರಮುಖವಾಗಿ ಕಾಲ ಮತ್ತು ಪ್ರದೇಶಗಳು ಕಾರಣವಾಗುತ್ತವೆ. ಕಾಲಾನುಗತವಾದ ಭಿನ್ನತೆ ಕಾಣದೆ ಹೋಗಬಹುದು. ಆದರೆ ಪ್ರದೇಶಾನುಗತವಾದ ಭಿನ್ನತೆ ಕಾಣದೆ ಹೋಗುವುದಿಲ್ಲ. ಇದಲ್ಲದೆ ಬೇರೆ ಬಾಹ್ಯಕಾರಣಗಳೂ ಉಂಟು. ರಾಜಕೀಯ ಹಾಗೂ ಆಡಳಿತಗಳ ಬದಲಾವಣೆಯ ಮೂಲಕ ಮೂಲ ಭಾಷೆಯಲ್ಲಿ ಭಿನ್ನತೆ ಉಂಟಾಗಬಹುದು. ಅಲ್ಲದೆ ಎರಡು ಉಪಭಾಷೆಗಳ ನಿಕಟ ಸಂಪರ್ಕದ ಮೂಲಕ ಭಾಷಾ ವ್ಯವಸ್ಥೆಯಲ್ಲಿ ಬದಲಾವಣೆಯಾಗುವುದುಂಟು.

ಭಾಷಾ ಭಿನ್ನತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭೌಗೋಳಿಕವಾಗಿ ಹಬ್ಬುವುದುಂಟು. ಇದಕ್ಕೆ ಜನರ ಸಂಪರ್ಕವೇ ಕಾರಣ. ಇಂಥ ಭಾಷಾ ಭಿನ್ನತೆಯ ಅಂಶಗಳ ಪ್ರಸಾರವನ್ನು ಸೀಮಾರೇಖೆಗಳ ಸಹಾಯದಿಂದ ಭಾಷಾ ಭೂಪಟಗಳ ಮೇಲೆ ಕಾಣಿಸಬಹುದು. ಸಂಬಂಧಿತ ಇಲ್ಲವೆ ಸಂಬಂಧರಹಿತ ಭಾಷೆಗಳ ಪರಸ್ಪರ ಪರಿಣಾಮದ ಮೇಲೆ ಕ್ಷೇತ್ರೀಯ ಪದ್ಧತಿ ಆಧಾರಿತವಾಗಿದೆ. ಈ ಪದ್ಧತಿಯಲ್ಲಿ ಭಾಷೆಗಳ ಸ್ವೀಕರಣವೇ ಸಾಮಗ್ರಿಯಾಗಿರುವುದು.

ಐತಿಹಾಸಿಕವಾಗಿ ಬೆಳೆದುಕೊಂಡು ಬಂದ ಭಾಷೆಗಳ ನಡುವಿನ ಅನುವಂಶಿಕ ಸಂಬಂಧವನ್ನು ಕಲ್ಪಿಸಲು ಪುನಾರಚನೆ ಪದ್ಧತಿ ಸಹಾಯವಾಗುತ್ತದೆ. ಆಂತರಿಕ ಮತ್ತು ಬಾಹ್ಯ ಪುನಾರಚನೆಗಳೆಂದು ಅದರಲ್ಲಿ ಎರಡು ವಿಧ. ಉಪಭಾಷೆಗಳ ನಡುವಿನ ಅನುವಂಶಿಕ ಸಂಬಂಧವನ್ನು ತೋರಿಸಲು ಆಂತರಿಕ ಪುನಾರಚನೆಯನ್ನು ಉಪಯೋಗಿಸಿದರೆ, ಭಾಷೆ ಭಾಷೆಗಳ ನಡುವಿನ ಅನುವಂಶಿಕ ಸಂಬಂಧವನ್ನು ಕಂಡುಹಿಡಿಯಲು ಬಾಹ್ಯ ಪುನಾರಚನೆಯನ್ನು ಉಪಯೋಗಿಸುತ್ತಾರೆ. ಹೀಗೆ ಐತಿಹಾಸಿಕ ತುಲನೆಯ ದೃಷ್ಟಿಯಿಂದ ಭಾಷೆಗಳನ್ನು ಆಯ್ದುಕೊಂಡು, ಅವನ್ನು ಚಿತ್ರಿಸಿ ತೋರಿಸಬಹುದು. ಒಂದು ಭಾಷೆಯ ಇಲ್ಲವೆ ಉಪಭಾಷೆಯ ಭೂಪಟವನ್ನು ತಯಾರಿಸುವುದೆಂದರೆ ಐತಿಹಾಸಿಕವಾಗಿ ಆ ಭಾಷೆಯ, ಅದರ ಉಪಭಾಷೆಗಳ ಪ್ರಸಾರ, ಅದರಲ್ಲಿ ಬೆಳೆದ ಭಿನ್ನತೆ ಮತ್ತು ಬದಲಾವಣೆಗಳ ಅಂಶಗಳನ್ನು ಅಭ್ಯಸಿಸಿದಂತೆಯೇ ಆಗುತ್ತದೆ. ಈ ಕಾರ್ಯವನ್ನು ಮಾಡುವ ಮೊದಲು, ಭಾಷೆಗೆ ಸಂಬಂಧಿಸಿದ ಎಲ್ಲ ಸಾಮಗ್ರಿಯನ್ನೂ ನಿವೇದಕನ ಮುಖಾಂತರ ಸಂಗ್ರಹಿಸಬೇಕಾಗುವುದು. ಇಂಥ ಕಾರ್ಯ ಪಾಶ್ಚಾತ್ಯ ದೇಶಗಳಲ್ಲಿ ಬಹುಕಾಲದಿಂದ ನಡೆದು ಬಂದಿದೆ. ಅವುಗಳಲ್ಲಿ ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಹಾಲೆಂಡ್, ಇಟಲಿ ಅಗ್ರಗಣ್ಯವಾಗಿವೆ.
ಭಾಷಿಕ ಬದಲಾವಣೆಯನ್ನು ತೌಲನಿಕ ಪದ್ಧತಿಗಳ ಸಹಾಯದಿಂದ ತೋರಿಸಬಹುದು. ಈ ತೆರನಾದ ಪದ್ಧತಿಗಳು ಮೂರು ಇವೆ; ಅನುವಂಶಿಕ ಪದ್ಧತಿ, ಪ್ರರೂಪ ಪದ್ಧತಿ, ಕ್ಷೇತ್ರೀಯ ಪದ್ಧತಿ, ಅನುವಂಶಿಕ ಪದ್ಧತಿ ಭಾಷಿಕ ಅಂಶಗಳ ಧ್ವನಿ ಮತ್ತು ಅರ್ಥಗಳ ನಡುವಿನ ಸಾಮ್ಯಗಳ ಮೇಲೆ ಆಧಾರಿತವಾಗಿರುತ್ತದೆ. ಪ್ರರೂಪ ಪದ್ಧತಿಯಲ್ಲಿ ಅನುವಂಶಿಕ ಸಂಬಂಧ ಹೊಂದಿದ ಭಾಷೆಗಳ ಪ್ರರೂಪವನ್ನು ಅಭ್ಯಸಿಸಲು ಸಾಧ್ಯವಿದೆ.

ಐತಿಹಾಸಿಕ ತೌಲನಿಕ ಪದ್ಧತಿಯ ಮೇರೆಗೆ ಭಾಷೆಗಳ ಅನುವಂಶಿಕತೆಯನ್ನು ಗುರುತಿಸಿದ ಮೇಲೆ ಅವುಗಳ ಉಪವಿಭಾಗೀಕರಣ ಮಹತ್ತ್ವದ ವಿಷಯವಾಗುತ್ತದೆ. ಭಾರತದ ಭಾಷೆಗಳು ವಿವಿಧ ಭಾಷಾಕುಟುಂಬಗಳಿಗೆ ಸೇರುತ್ತವೆ. ಇಂಥ ಭಾಷಾ ಕುಟುಂಬಗಳು ಮುಖ್ಯವಾಗಿ 1 ಇಂಡೋ-ಆರ್ಯನ್ ಕುಟುಂಬ (ಹಿಂದೀ ಪಂಜಾಬೀ, ಗುಜರಾತೀ, ರಾಜಸ್ಥಾನೀ, ಮರಾಠೀ, ಬಂಗಾಳೀ, ಬಿಹಾರೀ, ಒರಿಯ ಇತ್ಯಾದಿ) 2 ದ್ರಾವಿಡ ಭಾಷಾ ಕುಟುಂಬ (ಕನ್ನಡ, ತಮಿಳು, ತೆಲುಗು, ಮಲೆಯಾಳಂ, ತುಳು, ತೊದ, ಕೊಡವ ಇತ್ಯಾದಿ). 3 ಮುಂಡಭಾಷಾಕುಟುಂಬ (ಸಂತಾಲಿ, ಸೋರ). 4 ಟಿಬೆಟೋ-ಬರ್ಮೀಭಾಷಾಕುಟುಂಬ (ನಾಗಾ, ಗಾರೋ, ಬೋರೋ ಇತ್ಯಾದಿ). ಈ ಪ್ರಮುಖ ಭಾಷಾ ಕುಟುಂಬಗಳಿಗೆ ಸೇರಿದ ಭಾಷೆಗಳ ಉಪವಿಭಾಗೀಕರಣ ಮಾಡುವುದೂ ಐತಿಹಾಸಿಕ ಭಾಷಾವಿಜ್ಞಾನಕ್ಕೆ ಸೇರಿದ ವಿಷಯ. ಒಂದು ಭಾಷಾವಿಭಾಗಕ್ಕೆ ಸೇರಿದ ಭಾಷೆಗಳು ಮೂಲದಿಂದ ಬೇರ್ಪಟ್ಟು, ಮುಂದೆ ಮತ್ತೆ ಪ್ರತ್ಯೇಕ ಭಾಷೆಗಳಾಗಿ ಒಡೆಯುವುದಕ್ಕೆ ಮುಂಚೆ ಯಾವ ಯಾವ ಅಂಶಗಳನ್ನು ಬಳಸಿಕೊಂಡಿದೆ ಎಂಬುದನ್ನು ಗುರುತಿಸಲು ಸಾಧ್ಯವಿದೆ. ಇದರಿಂದ ಭಾಷೆಯ ಮೂಲರೂಪವನ್ನು ಪುನಾರಚಿಸಲು ಸಹಾಯವಾಗುತ್ತದೆ. ಒಂದು ಅಂಶ ಒಂದು ಕುಟುಂಬದ ಎರಡು ವಿಭಾಗಗಳಲ್ಲಿಯಾದರೂ ಕಂಡುಬಂದರೆ ಆ ಅಂಶವನ್ನು ಭಾಷಾಕುಟುಂಬದ ಮೂಲ ಅಂಶವೆಂದು ಹೇಳಬಹುದು. ದ್ರಾವಿಡ ಭಾಷೆಗಳನ್ನು ಪರಿಶೀಲಿಸಿದರೆ, ಆ ಕುಟುಂಬದಲ್ಲಿ ದಕ್ಷಿಣ ದ್ರಾವಿಡ, ಮಧ್ಯದ್ರಾವಿಡ ಮತ್ತು ಉತ್ತರ ದ್ರಾವಿಡಗಳೆಂದು ಮೂರು ಉಪವಿಭಾಗಗಳನ್ನು ಕಾಣುತ್ತವೆ.

ಐತಿಹಾಸಿಕ ಭಾಷಾವಿಜ್ಞಾನದಲ್ಲಿ ತುಲನಾತ್ಮಕ ಪದ್ಧತಿಗೆ ಮಹತ್ತ್ವವುಂಟು. ಇದರಿಂದ ಹೆಚ್ಚು ಸೋದರಿಯಾಗಿರುವ ಎರಡು ಭಾಷೆಗಳನ್ನು ಆಯ್ದು ಕೊಂಡು ಅವುಗಳ ಆಕೃತಿಯನ್ನು ಹೊಂದಿಸಿ, ಮೂಲಭಾಷೆಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಸೋದರಿ ಭಾಷೆಗಳ ಮೂಲಸ್ವರೂಪವನ್ನು ತಿಳಿದುಕೊಳ್ಳಲು ಅವುಗಳ ಆಕೃತಿಮಾಗಳ ತುಲನೆ ಮಾಡಬೇಕಾಗುತ್ತದೆ. ಈ ರೀತಿ ತುಲನೆ ಮಾಡುವುದೇ ತುಲನಾತ್ಮಕ ಪದ್ಧತಿ. ಇದಕ್ಕೆ ವಂಶವೃಕ್ಷ ಸಿದ್ಧಾಂತವೆಂದೂ ಕರೆಯುವುದುಂಟು. ಮೂಲಭಾಷೆಯಿಂದ ಹೊರಟ ಭಾಷೆಗಳನ್ನು ಈ ವಂಶವೃಕ್ಷ ಸಿದ್ಧಾತಂದ ಮೂಲಕ ವಿವರಸಿ ತೋರಿಸಲು ಅನುಕೂಲವಾಗುತ್ತದೆ. ಭಿನ್ನ ಭಾಷಿಕ ಅಂಶಗಳು ಭಿನ್ನ ಪ್ರದೇಶಗಳಲ್ಲಿ ತರಂಗಗಳಂತೆ ಹಬ್ಬುತ್ತವೆ. ಈ ಸಂಗತಿಯನ್ನು ಯೋಹಾನೆಸ ಷ್ಮಿಟ್ ತನ್ನ ತರಂಗ ಸಿದ್ಧಾಂತದ ಮೂಲಕ ತೋರಿಸಿಕೊಟ್ಟಿರುವರು.

ಭಾಷೆಗಳ ಮೂಲಸ್ವರೂಪವನ್ನು ಎರಡು ಪದ್ಧತಿಗಳಿಂದ ಕಂಡುಹಿಡಿಯಬಹುದು. ಒಂದು ಆಂತರಿಕ ಪುನಾರಚನೆಯ ಪದ್ಧತಿ ಎರಡು ಬಾಹ್ಯ ಪುನಾರಚನೆಯ ಪದ್ಧತಿ, ತುಲನಾತ್ಮಕ ಪದ್ಧತಿಯನ್ನು ಎರಡು ಭಿನ್ನ ಭಾಷೆಗಳಿಗೆ ಅನ್ವಯಿಸಿದರೆ ಅದುವೇ ಬಾಹ್ಯ ಪುನಾರಚನೆ. ಒಂದು ಭಾಷೆ ಒದಗಿಸುವ ಆಧಾರಗಳನ್ನು ಉಪಯೋಗಿಸಿ ಅದರ ಮೂಲಸ್ವರೂಪವನ್ನು ರಚಿಸುವುದೇ ಆಂತರಿಕ ಪುನಾರಚನೆ.

ಭಾಷಾ ಕಾಲಕ್ರಮ ವಿಜ್ಞಾನದ ಸಹಾಯದಿಂದ ಭಾಷೆಯ ಹಿರಿಮೆಯನ್ನು ಕಂಡು ಹಿಡಿಯಬಹುದು. ಈ ವಿಧಾನದ ಮೇರೆಗೆ ಭಾಷೆಗಳ ವಿವಿಧ ಘಟ್ಟಗಳ ಕಾಲನಿರ್ಣಯ ಮಾಡಬಹುದು. ಈ ರೀತಿ ಒಂದು ಭಾಷೆಯ ಕಾಲನಿರ್ಣಯವನ್ನು ಖಚಿತಗೊಳಿಸುವಾಗ ಕಲೆಹಾಕಿದ ಸಾಮಗ್ರಿಯನ್ನು ಶಾಬ್ದಿಕ ಸಂಬಂಧದ ಸಹಾಯದಿಂದ ತಿಳಿದುಕೊಳ್ಳಬೇಕೇ ಹೊರತು ಐತಿಹಾಸಿಕ ದಿನಾಂಕಗಳ ಮೂಲಕ ಅಲ್ಲ.

ಐತಿಹಾಸಿಕ ಭಾಷಾವಿಜ್ಞಾನದ ಅಧ್ಯಯನದಿಂದ ಜಗತ್ತಿನಲ್ಲಿ ಎಷ್ಟು ಭಾಷೆಗಳು ಬಳಕೆಯಲ್ಲಿವೆಯೆಂಬುದನ್ನು ಸ್ಥೂಲವಾಗಿ ತಿಳಿದುಕೊಳ್ಳಲು ಸಾಧ್ಯವಿದೆ. ಜಗತ್ತಿನ ಭಾಷಾಕುಟುಂಬಗಳಲ್ಲಿ ಇಂಡೋ-ಯೂರೋಪಿಯನ್ ಭಾಷಾಕುಟುಂಬ ಅತಿ ವಿಶಾಲವೂ ಮಹತ್ತ್ವದ್ದೂ ಆಗಿದೆ. ಈ ಕುಟುಂಬದಲ್ಲಿ ಜರ್ಮಾಜಿಕ್, ಕೆಲ್ಟಿಕ್, ರೋಮಾನ್ಸ್, ಬಾಲ್ಟಿಕ್ ಶಾಖೆಗಳಿವೆ. ಫಿಸ್ನೊ-ಅಗ್ರಿಕ್, ಆಲ್ಟಿಕ್, ಕಕೇಷನ್, ಬಾಸ್ಕ, ಆಫ್ರೋ-ಏಷ್ಯಾಟಿಕ್, ದ್ರಾವಿಡ-ಭಾಷಾ ಕುಟುಂಬ-ಮೊದಲಾದವನ್ನು ಪಟ್ಟಿ ಮಾಡಬಹುದು. ಇವಲ್ಲದೆ ಏಷ್ಯ ಮತ್ತು ಅಮೆರಿಕ ಖಂಡಗಳಲ್ಲಿ ಹಲವಾರು ಭಾಷಾಕುಟುಂಬಗಳನ್ನೂ ಇತ್ತೀಚೆಗೆ ಗುರುತಿಸಲಾಗಿದೆ.
ಒಂದು ಭಾಷೆ ಬಳಕೆಯಾಗುವ ಪ್ರದೇಶದ ಅಂತರ ಹಿಗ್ಗಿದಷ್ಟೂ ಅದರ ಭಿನ್ನತೆಯೂ ಹೆಚ್ಚುತ್ತದೆ. ಇಂಥ ಪರಿಸ್ಥಿತಿಗೆ ಪ್ರಾದೇಶಿಕ ಮತ್ತು ಸಾಮಾಜಿಕ ವೈವಿಧ್ಯಗಳು ಕಾರಣವಾಗುತ್ತವೆ. ಈ ಭಿನ್ನತೆಯ ಕಾರಣ ಒಂದು ಪ್ರದೇಶದ ಮಾತು ಮತ್ತೊಂದು ಪ್ರದೇಶದವರಿಗೆ ಅರ್ಥವಾಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಒಂದು ಸಾಮಾನ್ಯ ಸಂಪರ್ಕ ಮಾಧ್ಯಮದ ಆವಶ್ಯಕತೆ ಅತ್ಯಗತ್ಯ. ಈ ಸಾಮಾನ್ಯ ಸಂಪರ್ಕ ಮಾಧ್ಯಮವೇ ಪ್ರಮಾಣ ಭಾಷೆಯೆನಿಸಿಕೊಳ್ಳುವುದು.

ಹೀಗೆ ಚಾರಿತ್ರಿಕ ಭಾಷಾವಿಜ್ಞಾನ ವ್ಯಾಪಕ ಸ್ವರೂಪವನ್ನು ಹೊಂದಿ, ಭಾಷಾವಿಜ್ಞಾನದ ಅಧ್ಯಯನದಲ್ಲಿ ಮಹತ್ತ್ವದ ಸ್ಥಾನ ಪಡೆದಿದೆ.											(ಪಿ.ಬಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ